ಉಗಾಂಡದ ಪುರಾತತ್ವ

ಆದಿಮಾನವ ಸಂಸ್ಕøತಿಯ ಉಗಮ ಮತ್ತು ವಿಕಾಸಕ್ಕೆ ಇಲ್ಲಿ ಅತ್ಯಂತ ಪುರಾತನ ಆಧಾರಗಳು ದೊರಕಿವೆ. ಪ್ರಾಣಿಮಾನವನಾಗಿ ವಿಕಾಸಗೊಂಡ ಹೊಸದರಲ್ಲಿ ಅವನಿಂದ ನಿರ್ಮಿತವಾದ ಕಫೂವನ್ ಮತ್ತು ಓಲ್ಡೊವನ್ ಸಂಸ್ಕøತಿಯ ಉಂಡೆಕಲ್ಲಿನಾಯುಧಗಳು ಇಲ್ಲಿ ದೊರಕಿವೆ. ಪೂರ್ವಶಿಲಾಯುಗದಲ್ಲಿ ಓಲ್ಡೊವನ್ ಸಂಸ್ಕøತಿಯಿಂದ ಉಗಮಿಸಿದ ಅಬೆವಿಲಿಯನ್ ಅಷೂಲಿಯನ್ ಕೈಗೊಡಲಿ ಮತ್ತು ಚಕ್ಕೆಕಲ್ಲಿನಾಯುಧಗಳು ದೊರಕಿವೆ. ಕೈಕೊಡಲಿ ಸಂಸ್ಕøತಿಯ ಉತ್ತರಾರ್ಧ ಕಾಲದಲ್ಲಿ ಕ್ಲಿವರ್ ಎಂಬ ಕೊಡಲಿಗಳೂ ಲೆವಾಲ್ವ ರೀತಿಯ ಚಕ್ಕೆಕಲ್ಲಿನಾಯುಧಗಳೂ ಬಳಕೆಗೆ ಬಂದುವು. ಅನಂತರ ಸಣ್ಣ ಅಥವಾ ಮಧ್ಯ ಗಾತ್ರದ, ದ್ವಿಮುಖವಾಗಿ ಚಕ್ಕೆಗಳನ್ನು ತೆಗೆದು ತಯಾರಿಸಿದ ಮೊನಚಾದ ಸಣ್ಣ ಕೈಕೊಡಲಿಗಳನ್ನು ಉಪಯೋಗಿಸುತ್ತಿದ್ದ, ಸ್ಟೀಲ್ ಬೇ ಮತ್ತು ಅಷೂಲಿಯನ್ ಸಂಸ್ಕøತಿಯಿಂದ ಹುಟ್ಟಿ ಬಂದ, ಸಂಗೋವನ್ ಸಂಸ್ಕøತಿಗಳು ರೂಢಿಯಲ್ಲಿದ್ದುವು. ಪೂರ್ವಶಿಲಾಯುಗದ ಅಂತ್ಯದಲ್ಲಿ ಮುಗೋಸಿಯನ್ ಸಂಸ್ಕøತಿ ತಲೆದೋರಿ ಸೂಕ್ಷ್ಮ ಶಿಲಾಯುಧಗಳು ಬಳಕೆಗೆ ಬಂದುವು. ಅನಂತರದ ವಿಲ್ಟನ್ ಮತ್ತು ಲಂಪೆಂಬಾನ್ ಸಂಸ್ಕøತಿಗಳಲ್ಲಿ ಸೂಕ್ಷ್ಮ ಶಿಲಾಯುಧಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿದ್ದದ್ದಲ್ಲದೆ ಇವು ನವಶಿಲಾಯುಗದ ಸಂಸ್ಕøತಿಯತ್ತ ಮುನ್ನಡೆಯುವ ಪ್ರವೃತ್ತಿ ವ್ಯಕ್ತಪಡಿಸಿದುವು. ನವಶಿಲಾಯುಗದಲ್ಲಿ ಮುಖ್ಯ ಸಂಸ್ಕøತಿಗಳಾದ ಗುಂಬಾನ್ ಎ ಮತ್ತು ಬಿ ಸಂಸ್ಕøತಿಗಳಲ್ಲಿ ಕಲ್ಲಿನ ಪಾತ್ರೆ, ಮಡಕೆ, ನಾನಾವಿಧ ಫಲಕ, ಚಾಕು, ಒರೆಯುವ ಆಯುಧ, ಅರ್ಧ ಚಂದ್ರಾಕೃತಿಯ ಆಯುಧ ಮುಂತಾದ ಸೂಕ್ಷ್ಮಶಿಲಾಯುಧಗಳು ಬಳಕೆಯಲ್ಲಿದ್ದುವು. ಕ್ರಿ.ಪೂ. ಮೊದಲನೆಯ ಸಹಸ್ರಮಾನದ ಪ್ರಾರಂಭದಲ್ಲಿ ಬಳಕೆಗೆ ಬಂದ ನ್ಜೋರೋನದಿಯ ಮತ್ತು ಅದರ ಹಿಂದಿನ ಗುಂಬಾನ್ ಸಂಸ್ಕøತಿಗಳ ಕಾಲದಲ್ಲಿ ಈ ಪ್ರದೇಶ ಹಿಂದಿಳಿದಿತ್ತು. ಈಜಿಪ್ಟ್ ಮಾರ್ಗವಾಗಿ ಇಲ್ಲಿಗೂ ಪಶುಪಾಲನೆ ಹಾಗೂ ವ್ಯವಸಾಯ ಪದ್ಧತಿಗಳು ಕ್ರಮೇಣ ಹಬ್ಬಿರಬಹುದೆಂದು ಹೇಳಲಾಗಿದೆ. ಕಬ್ಬಿಣದ ಉಪಯೋಗ ಸುಮಾರು ಕ್ರಿ.ಶ. 3ನೆಯ ಶತಮಾನದ ಅನಂತರ ಬಂದಿರಬಹುದು. ನವಶಿಲಾಯುಗ ಮತ್ತು ಕಬ್ಬಿಣ ಯುಗಗಳಲ್ಲೂ ಬೇಟೆ ಜನರ ಮುಖ್ಯ ಕಸುಬುಗಳಲ್ಲೊಂದಾಗಿತ್ತು. ಅವರು ಕಾಡುಗಳಲ್ಲೂ ಗುಹೆಗಳಲ್ಲೂ ವಾಸಿಸುತ್ತಿದ್ದರು. ಇಲ್ಲಿನ ನಾನಾ ಬುಡಕಟ್ಟುಗಳು ಅಲೆಮಾರಿ ಜೀವನ ನಡೆಸುತ್ತಿದ್ದು 18-19ನೆಯ ಶತಮಾಗಳಲ್ಲಿ ಐರೋಪ್ಯರು ಇಲ್ಲಿ ಕಾಲಿಟ್ಟ ಅನಂತರ ಆಧುನಿಕ ನಾರಿಕತೆಯ ಪ್ರವೇಶವಾಯಿತು.						     
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ